ದೂರಪ್ರಾಚ್ಯ -
	ಪೂರ್ವ ಮತ್ತು ಆಗ್ನೇಯ ಏಷ್ಯ ಪ್ರದೇಶವನ್ನು ಸೂಚಿಸಲು ಪಶ್ಚಿಮದ ರಾಷ್ಟ್ರಗಳು ಸಾಮಾನ್ಯವಾಗಿ ಬಳಸುವ ಪದ (ಫಾರ್ ಈಸ್ಟ್) ಚೀನ, ಕೊರಿಯ, ಫಾರ್ಮೋಸ, ಜಪಾನ್, ಮತ್ತು ಮಂಗೋಲಿಯವನ್ನೂ ಕೆಲವು ವೇಳೆ ಸೋವಿಯೆತ್ ಒಕ್ಕೂಟದ ಫೆಸಿಪಿಕ್ ತೀರಪ್ರದೇಶವನ್ನು ಆಗ್ನೇಯ ಏಷ್ಯವನ್ನು ಒಳಗೊಂಡ ಭೂಭಾಗವನ್ನು ದೂರಪ್ರಾಚ್ಯವೆಂದು ಕರೆಯುವ ವಾಡಿಕೆ ಇದೆ.  ಭಾರತ ಪಾಕಿಸ್ತಾನ ಶ್ರೀಲಂಕಾ ನೇಪಾಲ ಭೂತಾನ, ಆಘ್ಘಾನಿಸ್ತಾನ ಇವನ್ನೂ ದೂರಪ್ರಾಚ್ಯದಲ್ಲಿ ಸೇರಿಸುವುದುಂಟು.  ಆದರೆ ವಾಸ್ತವವಾಗಿ ಇವು ದಕ್ಷಿಣ ಏಷ್ಯ ಎನಿಸಿಕೊಳ್ಳುತ್ತದೆ.  ತುಂಬ ಸೀಮಿತ ಅರ್ಥದಲ್ಲಿ ಪೂರ್ವ ಏಷ್ಯ ಮಾತ್ರ ದೂರ ಪ್ರಾಚ್ಯ ಎನಿಸಿಕೊಳ್ಳುತ್ತದೆ.  ಪಶ್ಚಿಮ ಯೂರೋಪಿನ ಕಡಲ ನೆರೆಯ ರಾಷ್ಟ್ರಗಳು ತಮಗಿಂತ ತುಂಬ ದೂರವಾಗಿದ್ದು ಆದರೆ ವ್ಯಾಪಾರವೇ ಮುಂತಾದ ಕಾರಣಗಳಿಂದಾಗಿ ತುಂಬ ಪ್ರಮುಖವೆನಿಸಿದ ಪೂರ್ವ ದೂರದ ಪ್ರದೇಶಗಳನ್ನು ದೂರ ಪ್ರಾಚ್ಯವೆಂದೂ ಏಷ್ಯದ ಪಶ್ಚಿಮ ಭಾಗದಲ್ಲಿರುವ ಇರಾನ್ ಮತ್ತು ನೆರೆಯ ರಾಷ್ಟ್ರಗಳ ಪ್ರದೇಶವನ್ನು ಮಧ್ಯಪ್ರಾಚ್ಯವೆಂದೂ ಮೆಡಿಟರೇನಿಯನ್ ಸಮುದ್ರದ ಪೂರ್ವ ಭಾಗದ ಪ್ರದೇಶವನ್ನು ಸಮೀಪ ಪ್ರಾಚ್ಯವೆಂದೂ ಕರೆದುವು. ಪಶ್ಚಿಮದ ಸಾಮ್ರಾಜ್ಯಶಾಹಿಗಳ ದೃಷ್ಟಿಯಿಂದ ನೀಡಲಾದ ಹೆಸರುಗಳು ಭಾರತದಂಥ ಏಷ್ಯನ್ ರಾಷ್ಟ್ರದ ದೃಷ್ಟಿಯಿಂದ ಸೂಕ್ತವೆನಿಸುವುದಿಲ್ಲ. ದೂರ ಪ್ರಾಚ್ಯವನ್ನು ಪೂರ್ವ ಏಷ್ಯ, ಆಗ್ನೇಯ ಏಷ್ಯಗಳೆಂದೂ ಮಧ್ಯಪ್ರಾಚ್ಯವನ್ನು ಪಶ್ಚಿಮ ಏಷ್ಯವೆಂದೂ ಭಾರತ ಅಧಿಕೃತವಾಗಿ ವ್ಯವಹರಿಸುತ್ತದೆ.
 (ಎಚ್.ಆರ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ